ಕಮತನೂರ ಕೆರೆಗೆ ಶಾಸಕ ಸತೀಶ ಜಾರಕಿಹೊಳಿ, ಬಸವರಾಜ ಮಟಗಾರರ ಭೆಟ್ಟಿ
Posted on 04 October 2009 by murthy
(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 4 : ಕಳೆದ 15 ದಿನಗಳಿಂದ ಸುರಿದ ರಭಸದ ಮಳೆಯ ಹೊಡೆತಕ್ಕೆ ತಾಲೂಕಿನ ಕಮತನೂರ ಕೆರೆ ಒಡೆದು ಸಾವಿರಾರು ಎಕರೆ ಭೂಮಿಯಲ್ಲಿಯ ಬೆಳೆ ಹಾಗೂ ಫಲವತ್ತಾದ ಭೂಮಿ ಕೊಚ್ಚಿ ಹೋಗಿ ಕೋಟ್ಯಾವಧಿ ರೂ. ಗಳ ಹಾನಿಯಾಗಿದ್ದು ಸುದೈವದಿಂದ ಯಾವದೇ ರೀತಿಯ ಜಿವಹಾನಿಯಾಗದೆ 4 ಜಾನುವಾರುಗಳು ಮಾತ್ರ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಇಂದು ಯಮಕನಮರ್ಡಿ ಮತ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹಾಗೂ ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಬಸವರಾಜ ಮಟಗಾರ ಅವರು ಕಮತನೂರ ಕೆರೆಗೆ ಭೆಟ್ಟಿ ನೀಡಿ ಆದ ಹಾನಿಯನ್ನು ಪರೀಶೀಲಿಸಿ ಇರ್ವರೂ ಗೋಟೂರ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ಕರೆದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಶಾಸಕ ಸತೀಶ ಜಾರಕಿಹೊಳಿಯವರು ಮಾತನಾಡಿ ಕಮತನೂರ ಕೆರೆ ಒಡೆದು ಕೋಟ್ಯಾವಧಿ ರೂ. ಗಳ ಹಾನಿಯಾಗಿದ್ದು ಸಂತಸ್ಥರಿಗೆ ಹೆಚ್ಚಿನ ಪರಿಹಾರ ನೀಡಲು ತಹಶೀಲದಾರರಿಗೆ ತಿಳಿಸಲಾಗಿದೆ. ಈಗ ಸರಕಾರ 6 ಕೋಟಿ ರೂ ಗಳ ಪರಿಹಾರ ಹಣ ನೀಡಿದ್ದು ಅದು ತೀರಾ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಲು ಸರಕಾರವನ್ನು ಒತ್ತಾಯಿಸಿದರು. ಸರಕಾರದ ತಪ್ಪು ನೀತಿ, ತಾಂತ್ರಿಕತೆ ಹಾಗೂ ಕಳಪೆ ಮಟ್ಟದ ಕಾಮಗಾರಿಯಿಂದಾಗಿ ಕೆರೆ ಒಡೆದು ಹಾನಿಯಾಗಿರುವದಾಗಿ ಅವರು ಆರೋಪಿಸಿದರು. ಕೆರೆಗೆ ಒಳ ಹರಿವು ಹೆಚ್ಚಾದರೆ ಅದನ್ನು ಹೊರ ಬಿಡಲು ಮಾರ್ಗವಿಲ್ಲಾ. ಇದಕ್ಕೆ ಕ್ರಸ್ಟ ಗೇಟ ಅಳವಡಿಸಿಲಾಗಿಲ್ಲವೆಂದ ಅವರು ಕಮತನೂರ, ಗೋಟೂರ ಹಾಗೂ ಗವನಾಳ ಗ್ರಾಮಗಳ ಜನರ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು ಅವರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿದರು. ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಬಸವರಾಜ ಮಟಗಾರ ಮಾತನಾಡಿ ಕಳೆದ 8 ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಅನೇಕ ಮನೆಗಳು ಕುಸಿಯುವರೊಂದಿಗೆ ಮುಖ್ಯ ಬೆಳೆಗಳಾದ ಕಬ್ಬು, ಸೋಯಾಬೀನ, ತಂಬಾಕು ಬೆಳೆಗಳು ನಾಶವಾಗಿವೆ. 1997 ರಲ್ಲಿ ಕಮತನೂರ ಕೆರೆ ನಿರ್ಮಾಣ ಕಾರ್ಯ ಪ್ರಾರಂಭಗೊಂಡು 1999 ರಲ್ಲಿ ಪೂರ್ಣಗೊಂಡಿತು ಇದನ್ನು 2 ಕೋಟಿ 25 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಇದರಲ್ಲಿ ಸುಮಾರು 200 ಎಕರೆ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಇದರಿಂದ 1500 ರಿಂದ 2000 ಎಕರೆ ಭೂಮಿ ನೀರಾವರಿಯಾಗುವ ಕನಸು ಕಂಡ ರೈತನಿಗೆ 2 ಬಾರಿ ಕೆರೆ ಒಡೆದು ಆತನ ಕನಸು ಮಾತ್ರ ನನಸಾಗಲಿಲ್ಲ. ಸರಕಾರ ತಕ್ಷಣ ಪ್ರತಿ ಎಕರೆಗೆ 1 ಲಕ್ಷ ರೂ ಪರಿಹಾರ ಹಣ ನೀಡಬೇಕು ಇಲ್ಲದೆ ಹೊದರೆ ಜಾತ್ಯಾತೀತ ಜನತಾ ದಳ ಉಗ್ರ ಹೋರಾಟಕ್ಕಿಳಿಯುವ ಮುನ್ನೆಚ್ಚರಿಕೆ ನೀಡಿದರು. ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಕುಮಾರ ಸ್ವಾಮಿಗಳು ನೆರೆ ಹಾವಳಿ ಪ್ರದೇಶಗಳಿಗೆ ಭೆಟ್ಟಿ ನೀಡಿ ಜನರಿಗೆ ಆಹಾರ ಧಾನ್ಯ ಹಾಗೂ ಬಟ್ಟೆಗಳನ್ನು ಒದಗಿಸುತ್ತಿದ್ದು 7 ರಂದು ನಗರಕ್ಕೆ ಆಗಮಿಲಿದ್ದಾರೆಂದರು. ಕೆರೆಯ ನಿರ್ಮಾಣ ಕಾಮಗಾರಿ ತೀರಾ ಕಳಪೆ ಮಟ್ಟದ್ದಾಗಿದ್ದು ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೊಣೆಗಾರರಾಗಿದ್ದು ಅವರ ಮೇಲೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು. ರೈತ ಧುರೀಣ ಕಲ್ಯಾಣರಾವ ಮುಚಳಂಬಿ ಮಾತನಾಡಿದರು. ಜಯಶೀಲ ಪೋತದಾರ, ಅಶೋಕ ಅಂಕಲಗಿ, ಬಿ.ಎಸ್.ಸನದಿ, ಸದಾನಂದ ಕಬ್ಬೂರಿ, ಗೋಪಾಲ ಪಾಟೀಲ ಹಾಗೂ ಇನ್ನಿತರರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
