ಚಿಂದಿಯಾದ ಬದುಕು
Posted on 04 October 2009 by murthy
ಬೆಂಗಳೂರು, ಅ.4: ವರುಣನ ಅರ್ಭಟ ಕ್ಷಿಣಗೊಂಡಿದ್ದರೂ ಬದುಕು ಚಿಂದಿ ಮಾಡಿಕೊಂಡಿರುವ ನೊಂದವರ ನೋವು ಮತ್ತು ನರಳಾಟ ಮುಗಿಲು ಮುಟ್ಟಿದೆ. ಬೀಜಾಪುರ, ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳ ಕಾಲದಿಂದ ಬಿದ್ದ ಯಮ ಸ್ವರೂಪಿ ಮಳೆಯಿಂದ ಲಕ್ಷಾಂತರ ಜನ ನೆಲೆ ಕಳೆದುಕೊಂಡಿದ್ದು ಆಹಾರ ಮತ್ತು ನೀರಿಗಾಗಿ ಆಹಾಕಾರ ಉಂಟಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಮನೆಗಳು ಕುಸಿದು ಬಿದ್ದಿದ್ದು ಯಾವ ಹಳ್ಳಿ ನೋಡಿದರೂ ಅದು ನೀರಿನಿಂದಲೇ ಆವೃತ್ತಗೊಂಡಿದೆ. ಎಲ್ಲೆಂದರಲ್ಲಿ ಜಾನುವಾರುಗಳು ಸತ್ತು ಬಿದ್ದಿದ್ದು ಅವುಗಳನ್ನು ತೆಗೆದು ಹಾಕುವವರು ಇಲ್ಲದೆ ಇರುವುದರಿಂದ ಅವು ಕೊಳೆತು ದುರ್ನಾತ ಬರ ತೊಡಗಿದೆ.
ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಸಾಂಕ್ರಮಿಕ ರೋಗ ಭೀತಿ ಎದುರಾಗಿದ್ದುಜಿಲ್ಲಾಡಳಿತ ಆರೋಗ್ಯ ಸೇವೆ ನೀಡಲು ಮುಂದಾಗಿದ್ದರೂ ಜನರಿಗೆ ಅದನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಮನೆ ಕಳೆದುಕೊಂಡು ಬಹುತೇಕ ಮೂರಾಬಟ್ಟೆಯಾಗಿರುವ ಜನರಿಗೆ ನಿಲ್ಲಲು ನೆಲೆಯಿಲ್ಲ, ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ, ಕಳೆದಮೂರ್ನಾಲ್ಕು ದಿನಗಳಿಂದ ಹಸಿವಿನಿಂದ ಬಳಲುತ್ತಿರುವ ಉತ್ತರ ಕರ್ನಾಟಕದ ಜನತೆಗೆ ಸರ್ಕಾರ ತಲುಪಿಸುತ್ತಿರುವ ಆಹಾರದ ಪೊಟ್ಟಣಗಳೇ ಸಿಗುತ್ತಿಲ್ಲ.
ಸೂರು ಕಳೆದುಕೊಂಡು ಪ್ರಾಣ ಉಳಿಸಿಕೊಳ್ಳಲು ದೊಡ್ಡ ದೊಡ್ಡ ಮರಗಳ ಮೇಲೆ ಗುಡ್ಡದ ಮೇಲೆ ಮನೆಗಳ ಛಾವಣಿಗಳ ಮೇಲೆ ಏರಿ ಕುಳಿತಿರುವ ಜನರನ್ನು ರಕ್ಷಿಸುವುದು ಜಿಲ್ಲಾಡಳಿತಕ್ಕೂ ಕಷ್ಟವಾಗಿದೆ.
ಕುಂಭದ್ರೌಣ ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿದ್ದು ಜಲಾವೃತ್ತಗೊಂಡಿರುವ ಪ್ರದೇಶದ ಜನರಿಗೆ ಪರಿಹಾರದ ಸಾಮಾಗ್ರಿಗಳನ್ನು ಸಕಾಲದಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ.
ಆಹಾರ ಮತ್ತು ಸಹಾಯ ಹಸ್ತಕ್ಕಾಗಿ ಕಾದು ಕುಳಿತಿರುವ ಜನರಿಗೆ ಪರಿಹಾರಿ ಒದಗಿಸಲು ಜಿಲ್ಲಾಡಳಿತಗಳು ತೊಂದರೆ ಅನುಭವಿಸಬೇಕಾಗಿದೆ. ಈಗಾಗಲೇ 180ಕ್ಕೂ ಹೆಚ್ಚು ನಿಸ್ಸಾಹಕಯ ಜೀವಗಳು ಮಳೆಯ ಅರ್ಭಟಕ್ಕೆ ಬಲಿಯಾಗಿದ್ದು ನೂರಾರು ಸಂಖ್ಯೆಯಲ್ಲಿ ಜನರು ಕಣ್ಮರೆಯಾಗಿರುವ ಸಾಧ್ಯತೆ ಇದೆ.
ಇಲ್ಲಿಯವರೆಗೂ ಮಳೆಯಲ್ಲಿ ಕಣ್ಮರೆಯಾಗಿರುವ ಯಾರೊಬ್ಬರ ಮಾಹಿತಿಯೂ ದೊರೆತಿಲ್ಲ, ವೃದ್ದರು, ಮಹಿಳೆಯರು, ಮಕ್ಕಳು ಸೇರಿದಂತೆ ಅಸಾಹಯಕರ ನೋವಿನ ಅಕ್ರಂಧನ ಮಡವುಗಟ್ಟಿ ನಿಂತಿದೆ. ಮನೆಯನ್ನು ಕಳೆದುಕೊಂಡವರಿಗೆ ಮುಂದಿನ ಜೀವನ ಹೇಗೆ ಎಂಬ ಚಿಂತೆ ಸಹ ಕಾಡ ತೊಡಗಿವೆ.
ಉತ್ತರ ಕರ್ನಾಟಕದ ಸಮಗ್ರ ಭಾಗವೇ ಜಲಮಾಯವಾಗಿರುವುದರಿಂದ ಸಂತ್ರಸ್ತರಿಗೆ ಆಹಾರ ಮತ್ತು ನೀರನ್ನು ಒದಗಿಸಲು ಜಿಲ್ಲಾಡಳಿತ ಹರ ಸಾಹಸವನ್ನು ಪಡುತ್ತಿದ್ದರೂ ಆಹಾರ ತಲುಪಿಸಲು ವರುಣದೇವ ಸೃಷ್ಟಿಸಿರುವ ಅವಾಂತರಗಳು ಅದಕ್ಕೆ ಸಾಕಷ್ಟು ಅಡ್ಡಿವುಂಟು ಮಾಡಿವೆ.
ಸಂತ್ರಸ್ತರಿಗಾಗಿ ನಿರ್ಮಿಸಿರುವ ಗಂಜೀ ಕೇಂದ್ರಗಳಲ್ಲಿ ಬದುಕು ಕಳೆದುಕೊಂಡ ಜನರು ನೋವು ಅನುಭವಿಸುತ್ತಿದ್ದಾರೆ. ಈಗಾಗಲೇ ಮಳೆಯಿಂದಾಗಿ ಮೃತಪಟ್ಟಿ ತಮ್ಮವರನ್ನು ನೆನೆದು ದುಃಖಿಸುತ್ತಿರುವ ಜನರು ಚಿಂತೆಯ ಮಡಿಲಿನಲ್ಲಿ ಬಿದ್ದಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಂದಾಯ ಸಿಚವ ಕರುಣಾಕರರೆಡ್ಡಿ ಸೇರಿದಂತೆ ಉಸ್ತುವಾರಿ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿ ಸಂತ್ರಸ್ತಗೊಂಡಿರುವ ಲಕ್ಷಾಂತರ ಜನರಿಗೆ ಆಹಾರ ಪೂರೈಕೆ ಹಾಗೂ ಮರು ವಸತಿ ಕೇಂದ್ರಗಳನ್ನು ನಿರ್ಮಿಸಿದ್ದಾರೆ.
ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಸೈನಿಕರ ಸಹಾಯೋಗದಲ್ಲಿ ಕೈಗೊಂಡಿದ್ದರೂ ನಿರಾಶ್ರಿತರಿಗೆ ಪರಿಹಾರ ಸಾಮಾಗ್ರಿಗಳನ್ನು ತಲುಪಿಸುವುದಕ್ಕೆ ಸಾಕಷ್ಟು ಎಡಲ್ತೊಡಲ್ ಉಂಟಾಗಿವೆ.
ರೈಲು ಮಾರ್ಗ ಇರುವ ಕಡೆಗೆ ಪರಿಹಾರ ಸಾಮಾಗ್ರಿಗಳನ್ನು ಸಾಗಿಸಲು ರೈಲು ಹಳಿಗಳು ಕೊಚ್ಚಿ ಹೋಗಿರುವುದರಿಂದ ಪರಿಹಾರ ಕಾರ್ಯಕ್ಕೆ ತೀವ್ರ ತೊಂದರೆಯಾಗಿದೆ. ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಹಾಗೂ ಸಂಪರ್ಕ ಸಾಧನೆಗಳು ಸಂಪೂರ್ಣ ನಾಶವಾಗಿರುವ ಹಿನ್ನೆಲೆಯಲ್ಲಿ ಯಾವುದನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಸದಾ ಬರದ ಛಾಯೆಯಲ್ಲಿ ಬದುಕು ದೂಡುತ್ತಿದ್ದ ಉತ್ತರ ಕರ್ನಾಟಕದ ಜನರಿಗೆ ಏಕಾ ಏಕಿಯಾಗಿ ಉಂಟಾದ ಪ್ರವಾಹದಿಂದ ಬರ ಸಿಡಿಲು ಬಡಿದಂತೆ ಆಗಿದೆ. ಬದುಕನ್ನೇ ಛಿದ್ರಗೊಳಿಸಿದ ಮಳೆರಾಯನಿಗೆ ಶಾಪವನ್ನು ಹಾಕುತ್ತಿರುವ ಜನರು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಹಾಯಕ್ಕಾಗಿ ಹಾತೊರೆಯುತ್ತಿದ್ದಾರೆ.
