ಸರಿಯದ ಕಾರ್ಮೌಡ, ಸುರಿಯದ ಮಳೆ…!
Posted on 30 October 2009 by Venkatesh
ಬೆಂಗಳೂರು 29- ಪಟ್ಟು ಪ್ರತಿಪಟ್ಟುಗಳ ವರಸೆಯಿಂದ ಭಾಜಪದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೆ ಏರಿದೆ. ಬಲಾಬಲ ಪರೀಕ್ಷೆಗೆ ಎರಡೂ ಬಣಗಳು ಅಗತ್ಯ ಭೂಮಿಕೆ ಸಿದ್ಧಪಡಿಸಿಕೊಳ್ಳಲು ಮುಂದಾಗಿವೆ. ಈ ಮಧ್ಯೆ ವಿಧಾನಸಭಾ ಅಧ್ಯಕ್ಷ ಜಗದೀಶ ಶೆಟ್ಟರ್ ಅವರನ್ನು ಅನೇಕ ಶಾಸಕರು ಭೆಟ್ಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಯಾವುದೆ ಒತ್ತಡಕ್ಕೆ ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಬಳ್ಳಾರಿ ಸಚಿವರು ಹಾಗೂ ಅವರ ಬೆಂಬಲಿಗ ಸಚಿವರನ್ನು ಸಂಪುಟದಿಂದ ಕೈಬಿಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಗಣಿ ದೊರೆಗಳ ಬೆಂಬಲಿಗ ಶಾಸಕರು ಹೈದ್ರಾಬಾದ್ ಹಾಗೂ ಬಳ್ಳಾರಿಗಳಲ್ಲಿ ಪ್ರತ್ಯೇಕ ಸಭೆ ನಡೆಸಿ ಸಂಜೆ ಹೈದ್ರಾಬಾದಕ್ಕೆ ದೌಡಾಯಿಸಿದ್ದಾರೆ. ಸುಮಾರು 20 ರಿಂದ 30 ಶಾಸಕರು ಈ ಗುಂಪಿನಲ್ಲಿ ಇದ್ದಾರೆಂದು ಹೇಳಲಾಗಿದೆ. ಈ ಮಧ್ಯೆ ನವದೆಹಲಿಯಲ್ಲಿ ಮಾತನಾಡಿದ ವಿಜಾಪುರ ಸಂಸದ ರಮೇಶ ಜಿಗಜಿಣಗಿ ಯಡಿಯೂರಪ್ಪ ಪಕ್ಷದ ಹಿತದೃಷ್ಟಿಯಿಂದ ಸ್ಥಾನ ತ್ಯಾಗ ಮಾಡಬೇಕು ಎಂಬ ಉಪದೇಶವನ್ನು ಮಾಡಿದ್ದಾರೆ. ಯಡಿಯೂರಪ್ಪ ಬಣದ ಸದಾನಂದಗೌಡ, ಸಿ.ಟಿ.ರವಿ, ಜಗದೀಶ ಶೆಟ್ಟರ್ ಅವರನ್ನು ಭೆಟ್ಟಿಯಾಗಿ ಸಚಿವ ಸ್ಥಾನ ಒಪ್ಪಿಕೊಳ್ಳಬೇಕು ಎಂದು ಮಾಡಿರುವ ಆಗ್ರಹ ವಿಫಲವಾಗಿದ್ದು, ಸಚಿವರಾಗುವದಿಲ್ಲವೆಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ರಾಜ್ಯದ ಹೊರಗೆ ಪ್ರವಾಸದಲ್ಲಿದ್ದ ಅನಂತಕುಮಾರ ಅವರು ವರಿಷ್ಠರ ಸೂಚನೆಯ ಮೇರೆಗೆ ಬೆಂಗಳೂರಿಗೆ ದೌಡಾಯಿಸಿದ್ದು, ಜೇಟ್ಲಿಯವರ ಜೊತೆಗೆ ಮಾತನಾಡಿದ್ದಾರೆ.
ಸಂಧಾನಕ್ಕಾಗಿ ಆಗಮಿಸಿರುವ ಅರುಣ ಜೇಟ್ಲಿಯವರು ಇಂದು ಸಹ ಮುಖ್ಯಮಂತ್ರಿ ಹಾಗೂ ಗಣಿ ದೊರೆಗಳ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನು ನಿರಂತರವಾಗಿ ನಡೆಸಿದ್ದಾರೆ. ಈ ಮಧ್ಯೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಳವಾಡ ಗ್ರಾಮದಲ್ಲಿ ಗಣಿ ದೊರೆಗಳು ಎರಡನೇ ನವಗ್ರಾಮ ನಿರ್ಮಾಣ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತರ ಗಣಿ ಉದ್ಯಮಿಗಳ ಸಹಕಾರದಿಂದ ತಾವೇ 50 ಸಾವಿರ ಮನೆಗಳನ್ನು ಮನೆ ಕಳೆದುಕೊಂಡವರಿಗೆ ಕಟ್ಟಿ ಕೊಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ.
ಈ ಮಧ್ಯೆ ದೇವೇಗೌಡರು ಈಗ ನಡೆಯುತ್ತಿರುವದು ಭಾಜಪ ಆಂತರಿಕ ಕಲಹವಾಗಿದ್ದು, ನಾವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪವನ್ನು ಮಾಡುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರುಣ ಜೇಟ್ಲಿ ರಾಜಿ ಸಂಧಾನವನ್ನು ಸಿದ್ಧಪಡಿಸತೊಡಗಿದ್ದು, ವರಿಷ್ಠರ ಅನುಮತಿ ಪಡೆದು ಆ ಸಂಧಾನದ ಸೂತ್ರಗಳನ್ನು ಬಹಿರಂಗಗೊಳಿಸುವ ಸಾಧ್ಯತೆಯಿದೆ ಎಂದು ಭಾಜಪ ಆಪ್ತ ಮೂಲಗಳು ಹೇಳಿವೆ. ಆದರೆ ಇಂದೂ ಸಹ ಕಗ್ಗಂಟು ಮುಂದುವರೆದಿದ್ದು, ಸಂಜೆಯವರೆಗೆ ಪರಿಹಾರಗೋಚರವಾಗಿಲ್ಲ.
