ಕಬ್ಬು ಬೆಳೆಗಾರರ ಸಮಸ್ಯೆಗೆ ಸಮಿತಿ ರಚನೆ: ಸಿಎಂ
Posted on 20 January 2010 by murthy
ಬೆಂಗಳೂರು, ಜ.20- ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅಧ್ಯಯನ ನಡೆಸಿ ವರದಿ ನೀಡಲು ಸಕ್ಕರೆ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿಗೆ ವಿಮೆ ಜಾರಿ ಸಾಧ್ಯವಿಲ್ಲ. ಪರ್ಯಾಯ ಮಾರ್ಗ, ಬೇರೆ ರಾಜ್ಯಗಳಲ್ಲಿರುವ ಸ್ಥಿತಿ-ಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗುವುದು ಎಂದರು.
ಸಕ್ಕರೆ ಬೆಳೆಗಾರರ ಸಮಸ್ಯೆ ಕುರಿತಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದ ಅವರು, ಕಬ್ಬಿಗೆ ಉತ್ತಮ ಬೆಲೆ ಸಿಗಬೇಕೆಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ಕೆಲ ಕಾರ್ಖಾನೆಗಳು ಕಬ್ಬಿಗೆ ಬಾಕಿ ಹಣ ಪಾವತಿಸದೆ ರೈತರಿಗೆ ಕಿರುಕುಳ ನೀಡುತ್ತಿದ್ದು, ಅಂತಹ ಕಾರ್ಖಾನೆಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಕಂದಾಯ ಬಾಕಿ ವಸೂಲಿ ಮಾಡಲು ಸೂಚಿಸಲಾಗಿದೆ ಎಂದರು.
ತಜ್ಞರ ಅಧ್ಯಯನ ವರದಿ ಬಂದ ನಂತರ ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದ ಅವರು, 2009-10ನೇ ಸಾಲಿಗೆ ಕಬ್ಬಿನ ದರ ನಿಗದಿಪಡಿಸಲಾಗಿದ್ದು, ಶೇ.9.5 ರಷ್ಟು ಇಳುವರಿ ಇರುವ ಪ್ರತಿ ಟನ್ ಕಬ್ಬಿಗೆ 1298 ರೂ.ನೀಡಲಾಗುತ್ತಿದೆ. ಅದನ್ನು 51 ಸಕ್ಕರೆ ಕಾರ್ಖಾನೆಗಳಲ್ಲಿ 1800 ರೂ. ನಿಂದ 2050 ರೂ.ವರೆಗೂ ಹೆಚ್ಚಿಸಲಾಗಿದೆ. ಇದು ಉತ್ತರ ಕರ್ನಾಟಕದ ರೈತರಿಗೆ ಮಾತ್ರ ಅನ್ವಯವಾಗಲಿದೆ ಎಂದರು.
ದಕ್ಷಿಣ ಕರ್ನಾಟಕದಲ್ಲಿ ಸಾಗಾಣಿಕೆ, ಕಟಾವು ವೆಚ್ಚ ಸೇರಿ ಪ್ರತಿ ಟನ್ಗೆ 1500 ರಿಂದ 1798 ರೂ. ಕಬ್ಬಿನ ದರ ನಿಗದಿ ಮಾಡಲಾಗಿದೆ ಎಂದರು.
ಪ್ರತಿಭಟನೆ ತಾತ್ಕಾಲಿಕ ಹಿಂದಕ್ಕೆ: ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬಿನ ದರ ನಿಗದಿಪಡಿಸಲು ಫೆಬ್ರವರಿ 20ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ ಎಂದರು.
ರಾಜ್ಯ ಸಲಹಾ ದರ (ಎಸ್ಎಪಿ) ನಿಗದಿಪಡಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳು ನೀಡಲಾಗದಿದ್ದರೆ ಅಕ್ಕಿ ಗಿರಣಿಗಳಂತೆ ಕಬ್ಬನ್ನು ಪಡೆದು ಸಕ್ಕರೆಯನ್ನು ರೈತರಿಗೆ ನೀಡಲಿ ಎಂದು ಆಗ್ರಹಿಸಿದರು. ಬೆಳೆಗಾರರ ಕೆಲ ಸಮಸ್ಯೆಗಳಿಗೆ ಸಿಎಂ ಸ್ಪಂದಿಸಿದ್ದು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಲನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
