ಹಳ್ಳ ಹಿಡಿದ ಬೆಳಗಾವಿ ಬಸ್ ನಿಲ್ದಾಣ ಅಭಿವೃದ್ದಿ ಯೋಜನೆ
Posted on 07 June 2010 by murthy
ಬೆಳಗಾವಿ,6-ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಬಸ್ ದುರಸ್ತಿ ಘಟಕವನ್ನು ಆಟೋ ನಗರಕ್ಕೆ ಸ್ಥಳಾಂತರಿಸಿ ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಮಹತ್ವದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ.
ಈ ಹಿಂದೆ ಶಾಲಿನಿ ರಜನೀಶ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿ ಬಸ್ ನಿಲ್ದಾಣದ ಆವರಣದಲ್ಲಿರುವ ಬಸ್ ದುರಸ್ತಿ ಘಟಕವನ್ನು ಆಟೋನಗರಕ್ಕೆ ಸ್ಥಳಾಂತರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಈವರೆಗೆ ಅಧಿಕಾರಿಗಳು ಆಟೋ ನಗರಕ್ಕೆ ಬಸ್ ದುರಸ್ತಿ ಘಟಕವನ್ನು ಸ್ಥಳಾಂತರಿಸುವ ಗೋಜಿಗೆ ಹೋಗಿಲ್ಲ. ದುರಸ್ತಿ ಘಟಕದ ಸ್ಥಳಾಂತರಕ್ಕಾಗಿ ಆಟೋ ನಗರದಲ್ಲಿ ಬುಡಾ ನಿವೇಶನವನ್ನು ನೀಡಿದೆ. ಹೈಟೆಕ್ ಬಸ್ ನಿಲ್ದಾಣದ ಯೋಜನೆ ರೂಪಿಸಿ ಎರಡು ವರ್ಷಗಳೇ ಗತಿಸಿವೆ. ಸುಮಾರು 50 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದರೂ ಸಾರಿಗೆ ಸಚಿವರ ಇಚ್ಚಾಶಕ್ತಿಯ ಕೊರತೆಯಿಂದ ಗಡಿಭಾಗದ ಬೆಳಗಾವಿ ಬಸ್ ನಿಲ್ದಾಣ ಅಭಿವೃದ್ದಿ ಯೋಜನೆಗೆ ಚಾಲನೆ ದೊರೆತಿಲ್ಲ. ಈ ಹಿಂದೆ ಸಾರಿಗೆ ಸಚಿವ ಆರ್. ಅಶೋಕ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸ್ ನಿಲ್ದಾಣದ ಅಭಿವೃದ್ದಿಯ ಬಗ್ಗೆ ವಾಗ್ದಾನ ಮಾಡಿದ್ದರು. ಈವರೆಗೂ ಅವರು ಕೊಟ್ಟ ಭರವಸೆ ಈಡೇರಿಲಿಲ್ಲ.
ಬೆಳ ಗಾವೊ ಜನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಗರದಲ್ಲಿ ನಗರ ಬಸ್ ನಿಲ್ದಾಣ ಕೆಂದ್ರ ಬಸ್ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಘಟಕಗಳಿದ್ದರೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಬೆಳಗಾವಿ ಬಸ್ ನಿಲ್ದಾಣ ವಿಶಾಲವಾದ ಪ್ರದೇಶವನ್ನು ಹೊಂದಿದೆ. ಆದರೆ ಬಸ್ ದುರಸ್ತಿ ಘಟಕ ನಿಲ್ದಾಣದ ಜಾಗವನ್ನು ಆಕ್ರಮಿಸಿದೆ. ದುರಸ್ತಿ ಘಟಕವನ್ನು ಆಟೋ ನಗರಕ್ಕೆ ಸ್ಥಳಾಂತರಿಸಿದರೆ ಸುಮಾರು 30 ಎಕರೆಯಷ್ಟು ಭೂಮಿ ಸಿಗುತ್ತದೆ. ಈ 300 ಎಕರೆಯಷ್ಟು ಭೂಮಿಯಲ್ಲಿ ಬೆಳಗಾವಿ ನಗರಕ್ಕೆ ತಕ್ಕಂತೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಬಹುದಾಗಿದೆ. ಸಾರಿಗೆ ಸಚಿವ ಆರ್.ಅಶೋಕ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದು ನಿಲ್ದಾಣ ಅಭಿವೃದ್ದಿ ಯೋಜನೆಗೆ ಚಾಲನೆ ನೀಡುವಂತೆ ಕ್ರಮ ಕೈಗೊಳ್ಳಬಹುದೇ ಕಾದುನೋಡಬೇಕಷ್ಟೆ.
